ಕಾಪು;ಜೂ,21. ವಿಧಾನಸಭಾ ಚುನಾವಣೆಯಲ್ಲಿ ನಾಡಿನ ಜನತೆ ಕಾಂಗ್ರೆಸ್, ಜೆ.ಡಿ.ಎಸ್.ನ ಅಭ್ಯರ್ಥಿಗಳಿಗೆ ನಿವೃತ್ತಿ ನೀಡಿದ್ದಾರೆ. ನಾವು 110 ಸೀಟು ಗೆದ್ದಿದ್ದರೂ ನಮಗೆ ಜನಾದೇಶ ದೊರಕಿಲ್ಲ ಎಂದು ಪ್ರತಿಪಕ್ಷ ಹೇಳುತ್ತಿದೆ. ನಾವು ವಿಧಾನ ಪರಿಷತ್ ಚುನಾವಣೆಯನ್ನು ಗೆದ್ದು ನಮಗೆ ಜನಾದೇಶ ದೊರೆತಿದೆ ಎಂದು ಅನುಮೋದಿಸಬೇಕಾಗಿದೆ. ಇದಕ್ಕೆ ಕಾಲ ಕೂಡಿ ಬಂದಿದೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಅವರು ಕಾಪು ಬಿ.ಜೆ.ಪಿ. ವತಿಯಿಂದ ಕಾಪುವಿನ ಭಾಸ್ಕರ ಸೌಧದಲ್ಲಿ ಜರುಗಿದ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಿದ್ಧರಾಮಯ್ಯ, ಅನಿಲ್ ಲಾಡ್ ಜೆ.ಡಿ.ಎಸ್. ತೊರೆದು ಕಾಂಗ್ರೆಸ್ ಸೇರಿದ್ದರೂ ಇದೀಗ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಜೆ.ಡಿ.ಎಸ್. ಕಾಂಗ್ರೆಸ್ ಮತ್ತೆ ಒಂದಾಗಲು ಪ್ರಯತ್ನಿಸುತ್ತಿದೆ. ಇವರ ಈ ರಾಜಕೀಯ ನಾಟಕಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಈ ಚುನಾವಣೆಯ ಫಲಿತಾಂಶ ಹೊಸ ರಾಜಕೀಯ ಅಧ್ಯಾಯಕ್ಕೆ ದಿಕ್ಸೂಚಿಯಾಗಲಿದೆ. ಈ ಬಾರಿ ಪದವೀಧರ, ಶಿಕ್ಷಕ ಕ್ಷೇತ್ರದಲ್ಲಿ ಎಲ್ಲಾ ನಮ್ಮ ಅಭ್ಯರ್ಥಿಗಳು ಗೆಲ್ಲುವ ಮೂಲಕ ಎದುರಾಳಿಗಳನ್ನು ಕ್ಲೀನ್ ಸ್ವೀಪ್ ಮಾಡಲಿದ್ದೇವೆ ಎಂದು ಭರವಸೆಯಿತ್ತರು.
ಸಚಿವ ವಿ.ಎಸ್. ಆಚಾರ್ಯ ಮಾತನಾಡಿ ಸ್ಥಳೀಯ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಇರುವುದರಿಂದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ ಎಂದರು.
ಬ್ರಹ್ಮಾವರ ಬಿ.ಜೆ.ಪಿ. ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ತಾ.ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ, ಎ.ಪಿ.ಎಂ.ಸಿ. ಅಧ್ಯಕ್ಷ ವಿಜಯ ಕುಮಾರ್, ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಸಂತಿ ಮಧ್ವರಾಜ್, ಗಿರಿಧರ ಪ್ರಭು, ಜೆರಾಲ್ಡ್ ಫೆರ್ನಾಂಡಿಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವದಾಸ್ ಹೆಬ್ಬಾರ್ ಸ್ವಾಗತಿಸಿದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮುರಳೀಧರ ಪೈ ವಂದಿಸಿದರು.
No comments:
Post a Comment